ನನ್ನಜ್ಜಿಯ ಔತಣಕೂಟ
- poorna drishti
- Feb 12, 2023
- 1 min read
ಶ್ರೀಕೀರ್ತಿ. ಬೀ.ಎನ್.
ಅಜ್ಜಿ ಸಾಕಿದ್ದ ಕೋಳಿಗೆ
ಇರಲಿಲ್ಲ ಹೆಸರು, ಆದರೆ ಸಾಕಿದ್ದು
ಮೊಮ್ಮಕ್ಕಳಿಗೆ.
ಅಮಾವಾಸೆಯ ಮೊದಲೆ ಇಳಿದೆವು ನಾವು
ಹೊಕ್ಕಂತೆ ಮನೆಯಲ್ಲಿ
ರವೆಉಂಡೆ, ಚಕ್ಕಲಿ,
ಕಜ್ಜಾಯಗಳ ಸೌಂರ‍್ಯದ್ದೆ ಕಾವು.
ಆ ವಯಸ್ಸಿಗೆ
ಆ ಮನಸ್ಸಿಗೆ...
ಸ್ವರ್ಗದಲ್ಲಿ ನಾವು.
ಹಬ್ಬದ ದಿನದಂದು ಹಸಿರೆಲೆಮೇಲೆ
ಇಟ್ಟ ಎಲ್ಲ ತಿಂಡಿ ಅಡುಗೆ
ಅಷ್ಟಗಲssss
ಕಣ್ಣಿನೊಳಗೆ ತುಂಬಿಕೊಳ್ಳಲಾಗುತ್ತಿಲ್ಲಾ...
ಮೂಗಿನೊಳ್ಳೆಗಳು ಸಾಲುತ್ತಿಲ್ಲಾ...
ಅದಕ್ಕೂ ಮೇಲೆ
ಹರಿದು ಬಿಸಿ ತುಪ್ಪ
ಹೊಳೆವ ವಡೆ ಪಾಯಸ ಇನ್ನೂ ದಪ್ಪ.
ತಲುಪಿರಲೇಬೇಕು ಈಗಾಗಲೆ
ಸ್ವರ್ಗದಲ್ಲಿರು ಎಲ್ಲರಿಗೆ
ಸಂಪೂರ್ಣ ಬಾಳೆಎಲೆ
ಸಾಂಬ್ರಾಣಿಯ ಹೊಗೆಯೊಂದಿಗೆ.
ಹೊರಬಂದು ಕೆಲನಿಮಿಷದವರೆಗೆ
ಹಾಗೆ ಮೌನ, ನಿಶ್ಯಬ್ದ
ಅನಿಸಿದ್ದು, ಹಲವು ಘಂಟೆಗಳವರೆಗೆ.
ನಂತರ... ನಗೆ
ಒಳನಡೆದು ಎತ್ತುತ್ತಿದ್ದಂತೆ ಮಂಗಳಾರತಿ
ಎಲ್ಲವೂ ಎಲ್ಲವೂ ಇಳಿಯಿತು
ಮೂಗು ಬಾಯಿಂದ ಗಂಟಲವರೆಗೆ.
ಆನAತರದಲ್ಲೂ
ಎಲೆಯಲ್ಲುಳಿಸಿಕೊಂಡ ವಡೆ,
ಚಕ್ಕುಲಿಗಳು ಜೊತೆಗೆ
ಎರಡೂ ಕೈಗಳಲ್ಲೂ
ಸುಕ್ಕಿನುಂಡೆ.
ಮಾರನೆಯ ಮುಂಜಾನೆ ಬೆಳಕು
ವರುಷದೊಡಕು.
ಬೆಳಗೆದ್ದವರೆ ತಂಗಳಿಗಿಲ್ಲ
ಯಾವುದೇ ತೊಡಕು.
ಮುಗಿಸುತ್ತಿದ್ದಂತೆ ಇದ್ದ ತಂಗಳ...
ಅಜ್ಜಿ ಸಾಕಿದ್ದ ಕೋಳಿಗಿಲ್ಲ
ಮನೆಯಂಗಳ!
ಕುಯ್ದು, ಬಿಸಿನೀರದ್ದು, ಕಿತ್ತು-ಸುಟ್ಟು
ಹುರಿದರೆದ ಮಸಾಲೆಯ ಕೊಟ್ಟು
ಬಡಿಸಿದ್ದು ಒಬ್ಬೊಬ್ಬರಿಗೆ ಒಂದೊಂದೆ ಸೌಟು.
ಅಂದು ಅದೊಂದು ಸಿಗದ ಎಂದೆಂದೂ
ಸಂಪೂರ್ಣ ಬಾಡೂಟ
ನನ್ನಜ್ಜಿಯ ವರ್ಷದೊಡಕಿನ
ಔತಣಕೂಟ.
Comments