ಟಿ.ಎಸ್ ನಾಗಾಭರಣ ಅವರ ಜನುಮದ ಜೋಡಿ ಸಿನಿಮಾದಲ್ಲಿ ಅನಾವರಣಗೊಂಡಿರುವ ಗ್ರಾಮೀಣ ಬದುಕಿನ ವಿಶ್ಲೇಷಣೆ
- poorna drishti
- Feb 4
- 5 min read
ಸಂಪತ್ ಕುಮಾರ್.ಎಂ
ಸಂಶೋಧನಾರ್ಥಿ, ಕನ್ನಡಭಾರತಿ
ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ
ಮೊ : ೯೯೦೧೫೪೮೨೫೩
ಮಿಚಂಚೆ– sampathkumarnsr@gmail.com
ಬಂಧು-ಬಳಗವನ್ನು ಮೀರಿದಂತಹ ಬಾಂಧವ್ಯ ಇವೆಲ್ಲವನ್ನು ಒಳಗೊಂಡಿರುವAತಹ ಸುಂದರವಾದ ಪರಿಸರವನ್ನು ಗ್ರಾಮೀಣ ಪ್ರದೇಶದಲ್ಲಿ ನೋಡಲು ಮಾತ್ರ ಸಾಧ್ಯ. ಹಾಗಾಗಿಯೇ ಗ್ರಾಮಗಳನ್ನು ಪ್ರೀತಿ, ವಾತ್ಸಲ್ಯ, ಕಾರುಣ್ಯದ ಕಡಲು ಎಂದೇ ಕರೆಯಬಹುದು. ಕೆಲವು ವಿಷಯಗಳಲ್ಲಿ ಎಷ್ಟು ಧಾರಾಳತನವಿದೆಯೋ ಅಷ್ಟೇ ನಿರ್ಬಂಧಗಳು ಇರುವುದನ್ನು ಹಳ್ಳಿಗಳಲ್ಲಿ ನೋಡತ್ತೇವೆ. ತಮ್ಮ ಗ್ರಾಮಕ್ಕೆ ಅಥವಾ ಹಳ್ಳಿ ಸಂಸ್ಕೃತಿಗೆ ಧಕ್ಕೆ ಉಂಟಾಗುವAತಹ ಯಾವುದೇ ವಿಚಾರಗಳನ್ನು ಸುಲಭವಾಗಿ ಒಪ್ಪಿಕೊಳ್ಳದೆ ಇರುವಂತಹ ಮನಸ್ಥಿತಿಗಳು ಸಹ ಇಲ್ಲಿ ಕಂಡು ಬರುತ್ತವೆ. ಗ್ರಾಮೀಣ ಬದುಕು ಎಂದರೆ ತಕ್ಷಣ ಮನಸ್ಸಿಗೆ ಮೂಡುವುದು ಚೆಂದದ ವಾತಾವರಣ, ಹರಿವ ನೀರು, ತೋಟ-ಗದ್ದೆ, ಆರೋಗ್ಯಕರ ವಾತಾವರಣ, ಮಾತನಾಡುವ ಭಾಷೆ, ವಿವಿಧ ರೀತಿಯ ಹಬ್ಬಗಳು, ಜಾತ್ರೆಗಳು, ಪೂಜೆಗಳು ಹೀಗೆ ಮುಂತಾದವು ಕಣ್ಮುಂದೆ ರಾಚುತ್ತವೆ. ಅದೇ ರೀತಿಯಾಗಿ ಹಳ್ಳಿಯ ಬದುಕು ಎಂದರೆ ಸುಂದರವಾದÀ ಸೌಂದರ್ಯ್ಯವಷ್ಟೇ ಅಲ್ಲದೇ ಅದರ ಮತ್ತೊಂದು ಮುಖವನ್ನು ಸಹ ನೋಡಬಹುದು.
ಶಾಂತಿ ನೆಮ್ಮದಿಯನ್ನು ನೀಡುವ ಹಳ್ಳಿಯಾದರೂ ಸಹ ಇಲ್ಲಿ ಅಶಾಂತಿಯ ನೆಮ್ಮದಿಯಿಲ್ಲದ ಸಂಧರ್ಭಗಳು ಸಹ ನಿರ್ಮಾಣವಾಗುವಂತಹದ್ದನ್ನು ಕೂಡ ಇಲ್ಲಿ ಗಮನಿಸಬಹುದು. ಅದರಲ್ಲೂ ಮುಖ್ಯವಾಗಿ ಜಾತಿ ಎಂಬ ವಿಚಾರ ಎದುರಾದಾಗ ‘ಜಾತಿ’ಯ ಮುಂದೆ ಯಾವುದೂ ಇಲ್ಲ, ಎಲ್ಲಕ್ಕಿಂತಲೂ ಜಾತಿಯೇ ಮುಖ್ಯ ಎಂಬುದನ್ನು ಎತ್ತಿ ಹಿಡಿಯುವ ಮನಸ್ಥಿತಿಗಳು ಸಹ ಇಲ್ಲಿ ಬರುತ್ತವೆ. ಗ್ರಾಮೀಣ ಬದುಕಿನ ಆಚಾರ ವಿಚಾರ ಸಂಪ್ರದಾಯ ಸಂಸ್ಕಾರಗಳೆಲ್ಲವನ್ನು ಎಷ್ಟು ಕಟ್ಟುನಿಟ್ಟಾಗಿ ಪಾಲಿಸುವಂತಹ ಅದಕ್ಕೆ ಹೊಂದಿಕೊAಡು ಬೆಳೆಸಿಕೊಂಡು ಬದುಕುತ್ತಿರುವಂತಹ ಮನಸ್ಸುಗಳಿಗೆ ಕೊಂಚ ಬದಲಾವಣೆ ಅಂತ ಬಂದಾಗ ಅಥವಾ ಎದುರಾದಾಗ ಉಂಟಾಗುವ ಅವಘಡಗಳು ತೀರಾ ಕ್ರೌರ್ಯತೆಯನ್ನು ಮೆರೆಯುವಂತಹವುಗಳಾಗಿರುತ್ತವೆ.
ಪ್ರಸ್ತುತ ಟಿ.ಎಸ್.ನಾಗಾಭರಣ ಅವರು ನಿರ್ದೇಶಿಸಿರುವ ‘ಜನುಮದ ಜೋಡಿ’ ಸಿನಿಮಾದಲ್ಲಿ ಈ ಎಲ್ಲಾ ತರಹದ ವಿಚಾರಗಳನ್ನು, ಸಮಸ್ಯೆಗಳನ್ನು ಸವಾಲುಗಳನ್ನು ಬಿಂಬಿಸುವAತಹದ್ದಾಗಿದೆ. ನಾಗಾಭರಣ ಅವರು ಸಿನಿಮಾವನ್ನು ನೋಡಿರುವ ದೃಷ್ಟಿಕೋನ, ಕಥೆ ಹೇಳುವ ತಂತ್ರ, ಪಾತ್ರಗಳಿಗೆ ನೀಡಿರುವಂತಹ ಪ್ರಾಮುಖ್ಯತೆ, ಗ್ರಾಮೀಣ ಬದುಕಿನ ಜೀವನಶೈಲಿ ಹಾಗೂ ಇಲ್ಲಿನ ಪಾತ್ರಗಳ ಮೂಲಕ ಎತ್ತುತ್ತಿರುವ ಪ್ರಶ್ನೆಗಳೇನು ಅದಕ್ಕೆ ಪರಿಹಾರ/ಉತ್ತರಗಳೇನು ಈ ಎಲ್ಲವನ್ನೂ ಸಹ ಈ ಸಿನಿಮಾದಲ್ಲಿ ನೋಡಲಾಗಿದೆ.
ಸಮಸ್ಯೆಗಳ ವಿರುದ್ಧ ಹೋರಾಡುವ ಮನಸ್ಸುಗಳಿಗೆ ಸಿಗುವ ನ್ಯಾಯ/ಅನ್ಯಾಯದ ಕುರಿತು ಇಲ್ಲಿನ ಪಾತ್ರಗಳ ಮುಖೇನಾ ಗಂಭೀರವಾದAತಹ ಪ್ರಶ್ನೆಗಳನ್ನು ಹುಟ್ಟು ಹಾಕುವಂತಹ ಹಲವು ವಿಷಯದ ಕುರಿತು ಚರ್ಚಿಸಬಹುದಾದಂತಹುಗಳ ಬಗ್ಗೆ ಈ ಲೇಖನದಲ್ಲಿ ಚರ್ಚಿಸಿದ್ದೇನೆ.
“ಜನುಮದ ಜೋಡಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ವಿಜೇತ ಗುಜರಾತೀ ಕಾದಂಬರಿಕಾರ ಪನ್ನಾ ಲಾಲ್ ಪಟೇಲರ ‘ಮಳೆಲಾ ಜೀವ' ಕಾದಂಬರಿಯ ಕನ್ನಡ ಅನುವಾದ. ಗುಜರಾತ್ ಮತ್ತು ರಾಜಸ್ಥಾನಗಳು ಕೂಡುವಲ್ಲಿನ ಒಂದು ಹಳ್ಳಿ ಈ ಕಾದಂಬರಿಯ ಕಥಾಕ್ಷೇತ್ರ. ಇದರಲ್ಲಿ ನಮಗೆ 'ಪ್ರಾದೇಶಿಕ ಕಾದಂಬರಿ' ಪರಂಪರೆಯ ಒಂದು ಸ್ವಾಭಾವಿಕ ಹಾಗೂ ಭವ್ಯ ಮಾದರಿ ಕಾಣಸಿಗುತ್ತದೆ.” ಇದಕ್ಕೆ ಟಿ.ಎಸ್.ನಾಗಭರಣ ಅವರು ಚಿತ್ರಕಥೆ ಬರೆದು ನಿರ್ದೇಶಿಸಿದರೆ ಬರಗೂರು ರಾಮಚಂದ್ರಪ್ಪ ಅವರು ಈ ಸಿನಿಮಾಗೆ ಸಂಭಾಷಣೆಯನ್ನು ಬರೆದಿದ್ದಾರೆ.
ಜನುಮದ ಜೋಡಿ ಕಾದಂಬರಿಯ ಕುರಿತು ಕಾದಂಬರಿಕಾರರು ಹೀಗೆ ಹೇಳುತ್ತಾರೆ “ಈ ಕಾದಂಬರಿಯ ಸುಮಾರು ಒಂದು ವರ್ಷದ ಕಥಾಕಾಲದಲ್ಲಿ ಗ್ರಾಮ ಜೀವನದ ಸರಳತೆ, ನಿಷ್ಕಪಟತೆ, ಅಂಧವಿಶ್ವಾಸ ಹಾಗೂ ಪ್ರಾಣವನ್ನಾದರೂ ಕೊಟ್ಟು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಪ್ರವೃತ್ತಿಗಳು ಹೆಜ್ಜೆ ಹೆಜ್ಜೆಗೂ ಪ್ರಕಟವಾಗುತ್ತವೆ. ಭಾಷೆಯಂತೂ ಶುದ್ಧ ಗ್ರಾಮೀಣ: ನಡುನಡುವೆ ಕಾದಂಬರಿಕಾರರು ತಮ್ಮ ಅಮೂಲ್ಯ ಅನುಭವಸೂಕ್ತಿಗಳನ್ನು ಹೆಣೆದು ಅದಕ್ಕೆ ಕಳೆಕೊಟ್ಟಿದ್ದಾರೆ.” ಸಿನಿಮಾ ಶುರುವಾಗುತ್ತಿರುವುದು ಗ್ರಾಮದ ಜಾತ್ರೆಯ ಮೂಲಕ ಹಾಗೂ ಕಥಾನಾಯಕ ಕೃಷ್ಣನನ್ನು ಮತ್ತು ಕಥಾನಾಯಕಿ ಕನಕಳನ್ನು ಪರಿಚಯಿಸುತ್ತಿರುವುದು ಕೂಡ ಇದೇ ಜಾತ್ರೆಯಲ್ಲಿಯೇ ಪರಸ್ಪರ ಇಬ್ಬರ ಒಲವಿನ ಮೊಗ್ಗು ಅರಳುತ್ತಿರುವುದು ಕೂಡ ಇದೇ ಜಾತ್ರೆಯಲ್ಲಿಯೇ ಜಾತ್ರೆಯ ಮುಖೇನಾ ಇಡೀ ಸಿನಿಮಾದ ಚಿತ್ರಣವನ್ನು ಬಿಂಬಿಸುತ್ತಿದೆ. ಇಂತಹ ಸುಂದರ ಸನ್ನಿವೇಶದ ಒಳಗೆ ಅಸೂಯೆ ಮತ್ತು ದ್ವೇಷವೆಂಬ ವಿಷಗಾಳಿ ಬೀಸುತ್ತಿರುವುದು ‘ಸಿಂಗಾರಿಗೌಡ’ ಎಂಬ ಖಳನಾಯಕನ ಮೂಲಕ.
ಜಾತ್ರೆಯಲ್ಲಿ ರಥವನ್ನು ಎಳೆಯುವುದಕ್ಕೆ ಗ್ರಾಮದ ಹಿರಿಯ ಗೌಡನೇ ಬರಬೇಕು ಎಂಬುದು ಗ್ರಾಮಸ್ಥರ ಮನೋಭಿಲಾಷೆಯಾಗಿರುತ್ತದೆ. ಯಾವುದೋ ಕಾರಣದಿಂದ ಹಿರೇಗೌಡ ಅಲ್ಲಿಗೆ ಬರುವುದಿಲ್ಲ ಗೌಡರಿಗಾಗಿ ಕಾದು ಕುಳಿತಿದ್ದ ಜನಕ್ಕೆ ನಿರಾಸೆಯಾಗುತ್ತದೆ ಈಗ ರಥವನ್ನು ಎಳೆಯುವುದು ಯಾರು ಎಂದು ಚರ್ಚಿಸಿ ಕೊನೆಗೆ ಊರಿನ ಕಿರಿಯ ಗೌಡರಿಗೆ ರಥವನ್ನು ಎಳೆಯಲು ಸೂಚಿಸುತ್ತಾರೆ. ಆದರೆ ಇದಕ್ಕೆ ಹಿರೇಗೌಡನ ಮಗನಾದ ಸಿಂಗಾರಿಗೌಡ ವಿರೋಧ ವ್ಯಕ್ತಪಡಿಸುತ್ತಾನೆ. ಕೊನೆಗೆ ಎಲ್ಲರ ನಡುವೆ ಮಾತಿನ ಚಕಮಕಿ ನಡೆದು ಕಿರಿಯ ಗೌಡನೇ ರಥವನ್ನು ಎಳೆಯಲು ಮುಂದಾಗುತ್ತಾನೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆAದರೆ ರಥವನ್ನು ಎಳೆಯುವುದೇ ಇಲ್ಲಿ ಗೌಡರಿಗೆ ಪ್ರತಿಷ್ಠೆಯಾಗಿ ಕಾಣಿಸಿಕೊಳ್ಳುತ್ತಿರುವುದು. ಹಾಗೂ ಜಾತಿಯೊಳಗೆ ಅಧಿಕಾರಕ್ಕಾಗಿ ನಡೆಯುತ್ತಿರುವಂತಹ ಸಂಘರ್ಷವೂ ಹೌದು. ಮುಂದೆ ಇಲ್ಲಿ ರಥವನ್ನು ಕಿರಿ ಗೌಡ ಮತ್ತು ಗ್ರಾಮದ ಜನತೆ ಎಳೆದು ಸಂಭ್ರಮಿಸುತ್ತಿರುವ ಸನ್ನಿವೇಶದ ಒಳಗೆ ಹಿರಿ ಗೌಡನ ಮಗ ಸಿಂಗಾರಿಗೌಡ ಸಂಚು ಮಾಡಿ ರಥದ ಕಡಾಣಿಯನ್ನು ತೆಗೆಸಿ ರಥವನ್ನು ಬೀಳಿಸಲು ಸಂಚು ಮಾಡುತ್ತಾನೆ. ಆದರೆ ಈ ವಿಷಯ ಕಿರಿ ಗೌಡನ ತಮ್ಮ ಕೃಷ್ಣ (ಕಥಾನಾಯಕನಿಗೆ) ತಿಳಿದು ಆ ರಥವನ್ನು ಬೀಳದಂತೆ ನೋಡಿಕೊಳ್ಳುತ್ತಾನೆ. ಈ ದೃಶ್ಯದ ಮುಖೇನಾ ಹಿರೇಗೌಡನ ಮಗನ ಕೆಟ್ಟ ಮತ್ತು ಅಸೂಯೆ ತುಂಬಿದ ಮನಸ್ಥಿತಿ ಹಾಗೂ ಕಿರಿ ಗೌಡನ ತಮ್ಮನಾದ ಕೃಷ್ಣನ ಒಳ್ಳೆಯ ಮನಸ್ಥಿತಿಯ ಕುರಿತು ಇಲ್ಲಿ ತಿಳಿಯುತ್ತದೆ.
ಅಂದರೆ ಇಲ್ಲಿ ಮುಖ್ಯವಾಗಿ ಅರ್ಥೈಸಿಕೊಳ್ಳಬೇಕಾಗಿರುವಂತಹದ್ದು ಈ ಒಂದು ಜಾತ್ರೆಯ ಮೂಲಕ ಸಮಾಜವನ್ನು ಪ್ರತಿಬಿಂಬಿಸುತ್ತಿರುವುದು. ಈ ಸಮಾಜದಲ್ಲಿ ಎಲ್ಲಾ ರೀತಿಯ ಜನಗಳು, ಮನಸ್ಥಿತಿಗಳು ಸಿಗುತ್ತವೆ. ಎಂಬುದನ್ನು ಹೇಳುತ್ತಿದೆ ಹಾಗೂ ಇಲ್ಲಿ ಮನುಷ್ಯನ ಖುಷಿ, ಸಂತೋಷ ಎಲ್ಲವೂ ಸರಿ ಅದು ಜಾತ್ರೆ ಹಬ್ಬ ಹರಿದಿನದಂತಹ ಸಂದರ್ಭದಲ್ಲಿ ವರ್ಷಕ್ಕೊಮ್ಮೆ ಬರುವಂತಹದ್ದು. ಆದರೆ ಮನುಷ್ಯನ ದ್ವೇಷ ಮಾತ್ರ ಶಾಶ್ವತವಾಗಿರುವಂತಹದ್ದು. ಇಲ್ಲಿ ಮುಖ್ಯವಾಗಿ ಹೇಳ ಹೊರಟಿರುವಂಥದ್ದು ಜಾತಿ ಎಂಬುದನ್ನು. ನವಿರು ಭಾವಗಳು, ಹಳ್ಳಿಯ ಸಂಸ್ಕೃತಿ, ಹಬ್ಬ ಹರಿ ದಿನ ಎಲ್ಲವೂ ಇದೆ. ಅದರ ಜೊತೆಯಲ್ಲಿ ಇದರ ಒಳಗಿನ ದ್ವೇಷಗಳೇನು ಎಂಬುದನ್ನು ಹೇಳುತ್ತಿದೆ. ಜಾತಿ ಎಂಬ ಪ್ರಶ್ನೆ ಹಾಗೂ ಸಮಸ್ಯೆ ಅನ್ನುವಂತಹದ್ದು ಶುರುವಾಗುತ್ತಿರುವುದು ಕಿರಿ ಗೌಡನ ತಮ್ಮನಾದ (ಕೃಷ್ಣ) ಹಾಗೂ ಪಕ್ಕದ ಗ್ರಾಮದ (ಚಂದಾಪುರ) ಹುಡುಗಿ ಕನಕಳಿಗೂ (ಕಥಾನಾಯಕಿ) ಪ್ರೇಮ ಮೊಳೆತು ಪರಸ್ಪರ ಒಬ್ಬರಿಗೊಬ್ಬರು ಪ್ರೇಮಿಸಲಾರಂಭಿಸುತ್ತಾರೆ.
ಹೀಗಿರುವಾಗ ಒಮ್ಮೆ ತಲಕಾಡಿನಲ್ಲಿ ಪಟಾಲಮ್ಮನ ಹಬ್ಬದ ಪ್ರಯುಕ್ತ ನಡೆದ ಹರಿಗೋಲಾಟದಲ್ಲಿ ಕೃಷ್ಣನು ಪಾಲ್ಗೊಳ್ಳುತ್ತಾನೆ. ಅದನ್ನು ನೋಡಲು ಕನಕಳು ಸಹ ಬಂದಿರುತ್ತಾಳೆ ಸ್ಪರ್ಧೆ ಆರಂಭವಾದ ಸ್ವಲ್ಪ ಹೊತ್ತಿನಲ್ಲೇ ಹಿರೀಗೌಡನ ಮಗ ಸಿಂಗಾರಿಗೌಡನ ಸಂಚಿನಿAದ ಕೃಷ್ಣನನ್ನು ಸೋಲಿಸಲು ಪ್ರಯತ್ನಿಸುತ್ತಾರೆ ಆದರೆ ಹೋರಾಟ ಮಾಡಿ ಗೆದ್ದು ಬರುತ್ತಾನೆ ಕೃಷ್ಣ. ಸ್ಪರ್ಧೆಯಲ್ಲಿ ಗೆದ್ಧ ಕೃಷ್ಣನಿಗೆ ಬೆಳ್ಳಿ ಕಡಗವನ್ನು ನೀಡುತ್ತಾರೆ ಗ್ರಾಮದ ಜನ. ಆ ಕಡಗವನ್ನು ಕೃಷ್ಣನು ತಾನು ಪ್ರೇಮಿಸುವ ಹುಡುಗಿ ಕನಕಳಿಗೆ ಕೊಟ್ಟುಬಿಡುತ್ತಾನೆ. ಇದನ್ನು ಕಂಡ ಪೂಜಾರಿ ಮತ್ತು ಆ ಊರಿನ ಕೆಲ ವ್ಯಕ್ತಿಗಳು ಕೆಳ ಜಾತಿಯ ಹುಡುಗಿ ಈ ಕಡಗವನ್ನು ಮುಟ್ಟಿದ್ದು ತಪ್ಪು ಮೈಲಿಗೆ ಆಗೋಯ್ತು ಅಂತೇಳಿ ಆ ಕಡಗಕ್ಕೆ ತೀರ್ಥವನ್ನು ಹಾಕಿ ಶುಚಿಗೊಳಿಸುತ್ತಾರೆ. ಕನಕಳಿಗೆ ಅವಮಾನಿಸುತ್ತಾರೆ.
ಕನಕಳಿಗೆ ಇಲ್ಲಿಯವರೆಗೂ ಇಲ್ಲದಂತಹ ಸಮಸ್ಯೆಯೊಂದು ಶುರುವಾಗುತ್ತದೆ ಅದೇ ‘ಜಾತಿ' ಸಮಸ್ಯೆ ಕೀಳು ಜಾತಿಯವಳಾದ ನಾನು ಮೇಲು ಜಾತಿಯವನಾದ ಕೃಷ್ಣನನ್ನು ಪ್ರೇಮಿಸಿದ್ದು ತಪ್ಪಾ..? ಅನ್ನುವಂತಹ ಪ್ರಶ್ನೆಯೊಂದು ಮೂಡುತ್ತದೆ ನಾವಿಬ್ಬರೂ ದೂರವಾಗುವುದೇ ಲೇಸು ಎನ್ನುವಂತಹ ವಿಚಾರವನ್ನು ಕೃಷ್ಣನ ಬಳಿ ಪ್ರಸ್ತಾಪಿಸಿದಾಗ ಕೃಷ್ಣ ಅದಕ್ಕೆ ಹೇಳುವಂತಹದ್ದು “ಜಾತಿಗೆ ಜಾತಿಯೇ ವೈರಿ, ಜಾತಿ-ಕೀಳು ಪ್ರೀತಿ ಮೇಲು” ಎಂದು ಹೇಳಿ ಆಕೆಯ ಕೈಗೆ ಕಡಗವನ್ನು ಹಾಕಿ ನಾವಿಬ್ಬರು ಒಂದೇ ಜಾತಿ ಎಂದು ಹೇಳುವುದು ಇಲ್ಲಿ ಪ್ರೀತಿ ಎನ್ನುವುದು ಎಲ್ಲವನ್ನು ಮೀರಿದ್ದು ಎಂಬುದನ್ನು ಸಾಬೀತುಪಡಿಸುವಂತಹದ್ದಾಗಿದೆ.
“ಬೆಳಕು ಬೇಕು ಎಂದಾಗ ಕತ್ತಲು ಬಂದು ಕತ್ತುಹಿಸುತ್ತದೆ ಆದರೂ ಬೆಳಕಿನ ಬೆನ್ನು ಹತ್ತುವುದೇ ಜೀವನ” ಎಂಬ ಮಾತಿನಂತೆ ಪ್ರೇಮಿಗಳಿಬ್ಬರೂ ಮುಂದೆ ಒಂದಾಗುವ ಆಶಾವಾದದೊಂದಿಗೆ ಬದುಕು ಸವೆಸುತ್ತಿರುವಾಗಲೇ ಜಾತಿ ಎನ್ನುವಂತಹ ಬಿರುಗಾಳಿ ಅವರನ್ನು ನೆಮ್ಮದಿಯಾಗಿರಲು ಬಿಡುವುದಿಲ್ಲ. ಕೊನೆಗೆ ಎಲ್ಲಾ ರೀತಿಯಲ್ಲೂ ಚಿಂತಿಸಿ ಕನಕಳೊಂದಿಗೆ ಮದುವೆಯಾಗಲು ನಿರ್ಧರಿಸಿ ರಾತ್ರಿ ಸಮಯದಲ್ಲಿ ಅವಳೊಂದಿಗೆ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿರುವ ಕೃಷ್ಣನಿಗೆ ಆಘಾತವೊಂದು ನಡೆಯುತ್ತದೆ. ಸಿಂಗಾರಿಗೌಡನು ಕನಕಳನ್ನು ಅಪಹರಿಸಿ ಅದೇ ಜಾತಿಯ ಅಂದಾನಿ ಎಂಬುವರೊAದಿಗೆ ಮೋಸದ ಮದುವೆಯನ್ನು ಬಲವಂತವಾಗಿ ಮಾಡಿಸುತ್ತಾರೆ. ಇದರ ಹಿಂದೆ ಸಿಂಗಾರಿ ಗೌಡನಿಗೆ ಕೃಷ್ಣನ ಮೇಲಿದ್ದ ವೈಯಕ್ತಿಕ ದ್ವೇಷವೂ ಕಾರಣವಾದರೆ ಇದಕ್ಕಿಂತ ಮುಖ್ಯವಾಗಿ ಸಿಂಗಾರಿಗೌಡನು ಕನಕಳನ್ನು ಅನುಭವಿಸುವ ಅವಳ ದೇಹದ ರುಚಿ ನೋಡುವ ದುರುದ್ದೇಶವೂ ಇರುತ್ತದೆ. (ಇಲ್ಲಿ ಕಾಮದ ವಿಷಯ ಎದುರಾದಾಗ ಜಾತಿ ಎಂಬುದನ್ನು ನೋಡುತ್ತಿಲ್ಲ ಗೌಡ)
ಈ ಮೋಸದ ಮದುವೆಯೊಂದಿಗೆ ಕೃಷ್ಣ ಮತ್ತು ಕನಕಾಳ ಕನಸುಗಳು ಹೊಡೆದ ಕನ್ನಡಿಯಂತಾಗುತ್ತದೆ. ಇದರಿಂದ ಬೇಸತ್ತ ಕೃಷ್ಣನು ಸಿಂಗಾರಿಗೌಡನ ಮೇಲೆ ದಾಳಿ ಮಾಡಲು ಮುಂದಾಗುತ್ತಾನೆ ಹಿರಿಯರ ಮಾತಿಗೆ ಬೆಲೆ ಕೊಟ್ಟು ಸುಮ್ಮನಾಗುತ್ತಾನೆ. ಈ ಮೋಸದ ಮದುವೆಯ ನಂತರದಲ್ಲಿ ಆ ಗ್ರಾಮದೊಳಗೆ ನಡೆಯುವ ಘಟನೆಗಳೆಲ್ಲವನ್ನು ನೋಡಿದಾಗ ಮನುಷ್ಯತ್ವವೇ ಮರೆಯಾದಂತೆ ಕಾಣಿಸುತ್ತದೆ. ಜಾತಿಯತೆಯ ಬಿರುಗಾಳಿಯೊಳಗೆ ಸಿಲುಕಿ ನಲುಗುವ ಪ್ರೇಮಿಗಳಿಬ್ಬರ ಮನಸ್ಥಿತಿಗಳು ತುಂಬಾ ಶೋಚನಿಯವಾದುದಾಗಿದೆ. ಮೋಸದ ಮದುವೆಯನ್ನು ಎಷ್ಟೇ ವಿರೋಧಿಸಿದರು ಕೂಡ ಪ್ರಯೋಜನವಾಗುವುದಿಲ್ಲ. ‘ಎಲ್ಲಾ ಪ್ರತಿಭಟನೆಯನ್ನ ಜಾತಿ ಧಮನಿಸುತ್ತೆ ಹಾಗೂ ಬಂಡಾಯದ ಧ್ವನಿಯನ್ನು ಸಿನಿಮಾ ಅಡಗಿಸುತ್ತದೆ.' ಅನ್ಯ ಜಾತಿಯ ಕನಕಗಳನ್ನು ಪ್ರೀತಿಸಿರುವ ಕೃಷ್ಣ, ಅವಳನ್ನೇ ಮದುವೆಯಾಗುವುದರ ಮೂಲಕ ಜಾತಿಯತೆಯನ್ನ ಹೋಗಲಾಡಿಸುವಂತಹ ಹೊಸ ಬದಲಾವಣೆಯ ಸೂಚಕವಾಗಿ ಕೃಷ್ಣನು ಕಾಣಸಿಗವನು. ಹಾಗೂ ಇಲ್ಲಿ ಬದಲಾಗದ ಮನಸ್ಸುಗಳು ಬದಲಾವಣೆಯನ್ನು ಬಯಸುವ ಮನಸ್ಸುಗಳ ನಡುವಿನ ಸಂಘರ್ಷವಿದೆ.
ಸೌAದರ್ಯದ ಪ್ರತಿಕವಾಗಿ ಕಾಣಸಿಗುವ ಹಳ್ಳಿಯೊಳಗೆ ಜಾತಿಯತೆಯ ಜ್ವಾಲೆಯು ಉರಿಯುವ ರೀತಿಯನ್ನು ನೋಡಿದಾಗ ಹಳ್ಳಿಯೊಳಗೂ ದ್ವೇಷದ ಬಿಸಿ ಉಸಿರು, ಅಸೂಯೆಯ ಅಮಲು, ಕ್ರೂರತೆಯ ನೆತ್ತರು ಹರಿಯುವುದನ್ನು ನೋಡಿದರೆ ತುಂಬಾ ಭೀಕರ ಎಂದೆನಿಸುತ್ತದೆ. ಮೋಸದಿಂದ ಮದುವೆಯಾದ ಗಂಡನ ಜೊತೆ ಸಂಸಾರ ಮಾಡಲು ಒಪ್ಪದ ಕನಕ ಪ್ರತಿನಿತ್ಯ ಕೃಷ್ಣ ಇಂದು ಅಥವಾ ನಾಳೆ ನನ್ನವನಾಗುವನು ಎಂಬ ಯೋಚನೆಯಲ್ಲಿಯೇ ದಿನಗಳನ್ನು ಕಳೆಯುವ ಕಳಕಳ ಬದುಕು ಹರಿಗೋಲಿಲ್ಲದ ದೋಣಿಯಂತಾಗಿದೆ. ಗ್ರಾಮಸ್ಥರಿಂದ ಹಿಂಸೆ, ಮೇಲಿನ ಜಾತಿಯವರನ್ನು ಮದುವೆಯಾಗಲು ಬಯಸಿದವಳು, ಹಾದರಗಿತ್ತಿ, ಸೂಳೆ, ಬೋಸುಡಿ ಎಂಬAತಹ ಅವ್ಯಾಚ್ಯ ಶಬ್ದಗಳಿಂದ ನಿಂದಿಸುವ ಗ್ರಾಮದ ಮಹಿಳೆಯರಿಂದ ನೊಂದು ಬೆಂದಿದ್ದಾಳೆ ಉರಿವ ಒಲೆಯೊಳಗೆ ಒಣಗಿದ ಕಟ್ಟಿಗೆಯಂತಾಗಿದ್ದಾಳೆ ಕನಕ.
ಕನಕಳ ಮನೆಯಲ್ಲಿ ನಡೆದ ದುರ್ಘಟನೆಯೊಂದು ಗ್ರಾಮದವರ ಮನಸ್ಥಿತಿಯು ಮತ್ತಷ್ಟು ಅಲ್ಲೋಲ ಕಲ್ಲೋಲವಾಗುತ್ತದೆ. ಕನಕಳು ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ದತ್ತೂರಿ ಬೀಜದಿಂದ ಮಾಡಿಟ್ಟಿದ್ದ ಅಕಸ್ಮಾತಾಗಿ ಆಕೆಯ ಗಂಡನು ತಿನ್ನುವನು. ಗಂಡನು ಸತ್ತ ನಂತರ ಗ್ರಾಮಸ್ಥರೆಲ್ಲರೂ ಕನಕಳನ್ನು ಪಂಚಾಯಿತಿಗೆ ಸೇರಿಸಿ ನ್ಯಾಯ ಕೇಳಲು ಮುಂದಾಗುತ್ತಾರೆ. ಒಬ್ಬೊಬ್ಬರೂ ಒಂದೊAದು ರೀತಿ ಮಾತನಾಡಲಾರಂಭಿಸುತ್ತಾರೆ. ಈಕೆಯನ್ನು ಊರಿಂದ ಬಹಿಷ್ಕರಿಸಬೇಕು ಕೊಲ್ಲಬೇಕು ಹೀಗೆ ಬಾಯಿಗೆ ಬಂದAತೆ ಮಾತನಾಡುತ್ತಾರೆ. ಕೀಳು ಜಾತಿಯ ಹೆಣ್ಣು ಮಗಳು ಎಂಬ ಕಾರಣಕ್ಕೆ ತುಚ್ಛವಾಗಿ ನಡೆದುಕೊಳ್ಳುತ್ತಾರೆ. ಹಾಗೂ ಪಂಚಾಯಿತಿಯಲ್ಲಿ ನ್ಯಾಯ ಹೇಳುವವನು ಕೂಡ ಗೌಡರೇ. ಅಂದರೆ ಮೇಲು ಜಾತಿಯವರು. ತೀರ್ಪು ಕೊಡಲು ಯಾವೊಬ್ಬ ಕೆಳ ಜಾತಿಯವನನ್ನು ಕೇಳುವುದೇ ಇಲ್ಲ ಆತನನ್ನು ಹತ್ತಿರ ಸೇರಿಸುವುದು ಇಲ್ಲ.
ಅತಿಯಾಗಿ ನೊಂದ ಕನಕ ಮನದಲ್ಲಿ ಕಟ್ಟಿ ಹಾಕಿದ್ದ ಮಾತುಗಳೆಲ್ಲ ಹೊರಬಂದು ಗ್ರಾಮಸ್ಥರಿಗೆ ಉತ್ತರ ನೀಡುತ್ತಾಳೆ. ಗ್ರಾಮದವರ ಕ್ರೂರ ವರ್ತನೆಯನ್ನು ನೋಡಿ ಕನಕಳಿಗೆ ಬುದ್ಧಿ ಭ್ರಮಣೆಯಾದಂತಾಗುತ್ತದೆ (ಗ್ರಾಮದವರ ವರ್ತನೆಗಳಿಗೆ, ಸಂಸ್ಕೃತಿಗೆ, ವ್ಯವಸ್ಥೆಗೆ ಇಲ್ಲಿನ ನಿಯಮಗಳಿಗೆ ಜಾತಿ ಎಂಬ ಸೋಂಕು ತಗಲು ರೋಗಗ್ರಸ್ತರಾಗಿ ಬುದ್ದಿ ಭ್ರಮಣೆಯಾಗಿದೆ ಎಂಬ ಸಾಂಕೇತಿಕ ರೂಪವನ್ನು ಇಲ್ಲಿ ಅರ್ಥೈಸಿಕೊಳ್ಳಬಹುದು) ಲಕ್ಷಿö್ಮÃದೇವಿ ಜಾತ್ರೆಗೆ ಊರಿನ ಜನ ಹೊರಡುವಾಗ ಕೃಷ್ಣನ ಸ್ನೇಹಿತರು ಕನಕಗಳನ್ನು ಕರೆದುಕೊಂಡು ಹೊರಡುತ್ತಾರೆ. ಆಶ್ಚರ್ಯ್ಯ ಎಂಬAತೆ ಅದೇ ಜಾತ್ರೆಗೆ ಕೃಷ್ಣನು ಆಗಮಿಸುತ್ತಾನೆ. ಬುದ್ಧಿ ಭ್ರಮಣೆಯಾಗಿದ್ದ ಕನಕಾಳಿಗೆ ಕೃಷ್ಣನನ್ನು ನೋಡಿ ಮೊದಲಿನಂತಾಗುತ್ತಾಳೆ (ಗ್ರಾಮದಲ್ಲಿನ ವಿಷಮನಸುಗಳಿಗೆ ಜಾತಿ ಅನ್ನುವ ಹುಚ್ಚು ಬಿಡಬೇಕು ಎಂಬುದನ್ನು ಕನಕಳ ರೂಪದಲ್ಲಿ ತೋರಿಸುತ್ತಿದೆ).
ಪ್ರಸ್ತುತ ಜನುಮದ ಜೋಡಿ ಸಿನಿಮಾದಲ್ಲಿ ಜಾತಿ ವ್ಯವಸ್ಥೆ ಅನ್ನುವಂತಹದ್ದು ದೊಡ್ಡ ದೋಷವಾಗಿ ಪರಿಣಮಿಸಿದೆ. ಕೀಳು ಜಾತಿಯ ಹುಡುಗಿ ಎಂಬ ಕಾರಣಕ್ಕಾಗಿ ಆಕೆಯನ್ನು ಒಪ್ಪಿಕೊಳ್ಳಲಾಗದ ಗ್ರಾಮದ ಜನತೆ, ಅದರ ವಿರುದ್ಧ ಹೋರಾಟ ನಡೆಸುವ ಕಥಾನಾಯಕ ಹಾಗೂ ಕಥಾ ನಾಯಕಿ ಇಬ್ಬರೂ ಹೋರಾಡಿ ಸೋಲುತ್ತಾರೆ ಸೋತು ಗೆಲ್ಲುತ್ತಾರೆ..! ಜಾತಿಯ ಮುಂದೆ ಏನು ನಡೆಯುವುದಿಲ್ಲ ಜಾತಿ ಅನ್ನುವಂಥದ್ದು ಹೇಗೆ ಪ್ರಮುಖವಾಗಿದೆ ಎಂಬುದನ್ನು ಸಿನಿಮಾ ಹೇಳುತಿದೆ. ಹಾಗೂ ಜಾತಿ ಒಳಗಡೆ ನಡೆಯುವ ಅಧಿಕಾರದ ಹೊಡೆದಾಟವು ಇಲ್ಲಿದೆ. ಯಾವೊಬ್ಬ ತಳ ಸಮುದಾಯದವನನ್ನು ತೀರ್ಪು ನೀಡಲು ಬಳಸಿಕೊಳ್ಳಲಾಗದ ಸ್ಥಿತಿ ಮತ್ತು ಮೇಲ್ವರ್ಗದವರು ಕೆಳ ಜಾತಿಯ ಸ್ತಿçÃಯರನ್ನ ಕಾಮಿಸುವಾಗ ಜಾತಿಯ ಬಗ್ಗೆ ಯೋಚಿಸದೆ ಇದು ನಮ್ಮ ಹಕ್ಕು ಎಂದು ಭಾವಿಸುವ ಕ್ರೂರ ಮನಸ್ಥಿತಿಗಳ ಬಗ್ಗೆಯೂ ಇಲ್ಲಿ ವಿವಿಧ ಮುಖಗಳನ್ನು ಕಾಣಬಹುದು.
ಇಲ್ಲಿ ಜಾತಿ ನಿರ್ಮೂಲನೆ ಮಾಡಲು ಮುಂದಾಗುವ ಕಥಾಯನಾಯನನ್ನು ಗ್ರಾಮದ ಜನತೆ ಬಹಿಷ್ಕರಿಸುತ್ತಾರೆ. ಜಾತಿ ಅನ್ನುವಂತಹದ್ದು ಎಲ್ಲವನ್ನು ಧಮನಿಸುತ್ತದೆ. ಆದರೆ ಸಿನಿಮಾದ ಕೊನೆಯ ಹಂತಕ್ಕೆ ಬಂದಾಗ ಕಾಲ ಎಲ್ಲವನ್ನು ಬದಲಿಸುತ್ತದೆ ಎಂಬ ಮಾತು ಸತ್ಯವಾಗುತ್ತದೆ. ಜಾತಿಯನ್ನು ಮೀರಿದ್ದು ಪ್ರೀತಿ ಅದಕ್ಕೆ ಯಾವ ಜಾತಿಯೂ ಇಲ್ಲ ಎಂಬುದೇ ಒಟ್ಟು ಸಂದೇಶ.
ಆಕರ ಗ್ರಂಥಗಳು:
ಜನುಮದ ಜೋಡಿ ಕಾದಂಬರಿ- ಪನ್ನಾಲಾಲ್ ಪಟೇಲ್-ಸಾಹಿತ್ಯ ಅಕಾಡೆಮಿ - ೧೯೯೬
ಜನುಮದ ಜೋಡಿ (ಸಿನಿಮಾ) - ಎಸ್ ನಾಗಾಭರಣ ನಿರ್ದೇಶನ – ೧೯೯೬.
ಪರಾಮರ್ಶನ ಗ್ರಂಥಗಳು:
ಗುಬ್ಬಿಗೂಡು ರಮೇಶ್ - ನಾಗಾಭರಣ ಸಿನಿಮಾವರಣ -೨೦೨೦
ಗಿರಡ್ಡಿ ಗೋವಿಂದರಾಜು - ಸಮಗ್ರ ವಿಮರ್ಶೆ - ಸ್ವಪ್ನ ಬುಕ್ ಹೌಸ್, ಬೆಂಗಳೂರು -೨೦೧೫
ಕೆ. ವಿ. ಕಾರಂತ್ - ಚಲನ ಚಿತ್ರಗಳ ನಿರ್ಮಾಣ- ಇಂದಿರಾ ಪ್ರಕಾಶನ - ೨೦೧೮
ಡಾ.ಎನ್.ಕೆ ಪದ್ಮನಾಭ - ಅನನ್ಯ ಹಾದಿಯ ಹೆಜ್ಜೆಗಳು - ಬರಹ ಪಬ್ಲಿಷಿಂಗ್ ಹೌಸ್ - ೨೦೦೨
ರಹಮತ್‌ತರೀಕೆರೆ - ಸಾಂಸ್ಕೃತಿಕಅಧ್ಯಯನ – ಅಭಿನವ ಪ್ರಕಾಶನ -೨೦೧೭
ಡಿ.ಆರ್. ನಾಗರಾಜ್ - ಸಂಸ್ಕೃತಿ ಸಂಕಥನ- ವಸಂತ ಪ್ರಕಾಶನ – ೨೦೧೫
ಡಾ. ಡಿ.ವಿ, ಗುರುಮೂರ್ತಿ- ಕನ್ನಡ ಕಾದಂಬರಿ ಚಲನಚಿತ್ರ –ದೇಸಿ ಪ್ರಕಾಶನ- ೨೦೦೨
ರವೀಂದ್ರ - ನೂರೊಂದು ಕನ್ನಡ ಚಿತ್ರಗಳು –ಕೌಮುದಿ ಪ್ರಕಾಶನ ೨೦೧೩
ರಘುನಾಥ್ ಚಹಾ - ಬೆಳ್ಳಿ ತೆರೆ - ಇಂದಿರಾ ಪ್ರಕಾಶನ- ೨೦೧೬
ಉಷಾನವರತ್ನಮ್ - ಬೆಳ್ಳಿತೆರೆ- ಹೇಮಂತ ಸಾಹಿತ್ಯ-೧೯೮೬
Comentários